ಮಹಾದೇವಪ್ಪ, ಮೈಲಾರ		
1911-43. ಭಾರತ ಸ್ವಾತಂತ್ರ್ಯ ಹೋರಾಟಗಾರ, ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರಿನಲ್ಲಿ 1911 ಜೂನ್ 8ರಂದು ಜನನ. ತಂದೆ ಮಾರ್ತಾಂಡಪ್ಪ, ತಾಯಿ ಬಸವಮ್ಮ, ಪತ್ನಿ ಸಿದ್ದಮ್ಮ, ಹಿರೇಕೆರೂರು ತಾಲ್ಲೂಕಿನ ಹಂಸಭಾವಿ ಪ್ರೌಢಶಾಲೆಯಲ್ಲಿ ವ್ಯಾಸಂಗಮಾಡುತ್ತಿದ್ದ ಇವರು ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು, 1929ರಲ್ಲಿ ಧಾರವಾಡದ ಭಾರತೀಯ ತರುಣ ಸಂಘದ ಸದಸ್ಯರಾದರು. 

	ಸಬರಮತಿ ಆಶ್ರಮ ಸೇರಿ ಬಾಪೂಜಿಯವರ ಜೊತೆ 1930 ಏಪ್ರಿಲ್ 13ರಂದು ದಂಡಿ. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಉಪ್ಪಿನ ಕಾಯಿದೆ ಮುರಿದರು. ನಾಲ್ಕು ತಿಂಗಳ ಕಾರಾಗೃಹ ಶಿಕ್ಪೆಗೆ ಒಳಗಾದರು. ಮತ್ತೆ ಬಂಧನದಲ್ಲಿದ್ದ ಇವರನ್ನು ಗಾಂಧಿ-ಇರ್ವಿನ್ ಒಪ್ಪಂದವಾದಮೇಲೆ 1931ರಲ್ಲಿ ಬಿಡುಗಡೆ ಮಾಡಿದರು. ಮುಂದೆ ಕಾಯಿದೆಭಂಗ ಚಳುವಳಿಯಲ್ಲಿ (1932) ಭಾಗವಹಿಸಿ ಸೆರೆಮೆನೆ ಸೇರಿ 1933ರಲ್ಲಿ ಬಿಡುಗಡೆಯಾದರು. ತಮ್ಮ ಪತ್ನಿಯೊಡನೆ ಸಬರಮತಿ ಆಶ್ರಮದಲ್ಲಿ ಇದ್ದು ಬಾಪೂಜಿಯವರ ಅಣತಿಯಂತೆ ಕರ್ನಾಟಕಕ್ಕೆ ಹಿಂತಿರುಗಿ ಖಾದಿ ಗ್ರಾಮೋದ್ಯೋಗದಲ್ಲಿ ನಿರತರಾದರು. 1942ರ ಭಾರತ ಬಿಟ್ಟು ತೊಲಗಿ ಚಳವಳಿಯ ಕಾಲದಲ್ಲಿ ಇವರು ದೇಶಭಕ್ತರ ತಂಡ ಕಟ್ಟಿ ತಮ್ಮ ಚಟುವಟಿಕೆಯನ್ನು ಚುರುಕುಗೊಳಿಸಿದರು. ಮುಂದೆ 1943 ಏಪ್ರಿಲ್ 1 ರಂದು ಇವರು ತಮ್ಮ ಸಂಗಡಿಗರಾದ ವೀರಯ್ಯ ಕೊಗನೂರ, ತಿರುಕಯ್ಯ ಕೊಗನೂರ ಇವರೊಂದಿಗೆ ಹೊಸ ರೀತಿಯಲ್ಲಿದ್ದ ವೀರಭದ್ರ ದೇವಾಲಯವನ್ನು ಮುತ್ತಿ ಸರ್ಕಾರಿ ಕಂದಾಯದ ಹಣ ಲೂಟಿಹೊಡೆಯುತ್ತಿದ್ದಾಗ ದೇವರ ಹಿಂದೆ ಅಡಗಿ ಕುಳಿತಿದ್ದ ಪೋಲೀಸರ ಗುಂಡಿಗೆ ಸಂಗಡಿಗರೊಂದಿಗೆ ಬಲಿಯಾಗಿ ಹುತಾತ್ಮರಾದರು.					
(ಎಸ್‍ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ